ಬಕಲ್ ಹೆನ್ರಿ ತಾಮಸ್ 1821-62. ಇಂಗ್ಲಿಷ್ ಇತಿಹಾಸಕಾರ. 1821 ನವೆಂಬರ್ 24ರಂದು ಕೆಂಟ್‍ನ ಲಿ ಎಂಬಲ್ಲಿ ಜನಿಸಿದ. ದುರ್ಬಲ ಆರೋಗ್ಯದವನಾಗಿ ಹೆಚ್ಚು ಕಲಿಯಲಾಗಲಿಲ್ಲ. ಕೆಲವೇ ಉತ್ತಮ ಗ್ರಂಥಗಳ ಅಧ್ಯಯನ ಮತ್ತು ಪ್ರವಾಸಗಳಿಂದ ಜ್ಞಾನ ಸಂಪಾದನೆ ಮಾಡಿದ. ಬಕಲ್ 20 ವರ್ಷ ತುಂಬುವ ಮೊದಲೆ ಚೆಸ್ ಆಟಗಾರನಾಗಿ ಅಂತರರಾಷ್ಟ್ರೀಯ ಖ್ಯಾತಿಗಳಿಸಿದ್ದ. 1840ರಿಂದ 1844ರ ಅವಧಿಯಲ್ಲಿ ಯೂರೋಪಿಗೆ ಅನೇಕ ಸಲ ಭೇಟಿ ನೀಡಿದ. 1853ರ ವೇಳೆಗೆ ತನ್ನ ಅಧ್ಯಯನವನ್ನು ಇಂಗ್ಲೆಂಡಿಗೆ ಸೀಮಿತಗೊಳಿಸಿ 1857ರಲ್ಲಿ “ಇಂಗ್ಲೆಂಡಿನಲ್ಲಿ ನಾಗರಿಕತೆಯ ಇತಿಹಾಸ” ಗ್ರಂಥದ ಪ್ರಥಮ ಸಂಪುಟವನ್ನು ಹೊರತಂದ. ಅಕ್ಟೋಬರ್ 1861ರಿಂದ ಮಾರ್ಚಿ 1862ರ ಅವಧಿಯಲ್ಲಿ ಈಜಿಪ್ಟ್, ಸಿನಾಯ್, ಪೆಟ್ರ, ಹೆಬ್ರಾನ್, ಜೆರೊಸಲೆಮ್ ಮತ್ತು ನಜರತ್‍ಗಳಲ್ಲಿ ಪರ್ಯಟನೆ ಮಾಡಿದ. ನಜರತ್‍ನಲ್ಲಿ ಅವನಿಗೆ ವಿಷಮಶೀತ ಜ್ವರದ ಸೋಂಕು ತಗುಲಿತು. ಈ ಕಾಲದಲ್ಲೇ ಎರಡನೆಯ ಸಂಪುಟ ಪೀಠಿಕೆಯನ್ನುಳಿದು 1861ರಲ್ಲಿ ಪ್ರಕಟವಾಯಿತು. ಅದರ ಪೀಠಿಕೆಯನ್ನು ಬರೆಯುವ ಮುನ್ನವೆ ಬಕಲ್ 1862 ಮೇ 29ರಂದು ಡಮಾಸ್ಕಸ್‍ನಲ್ಲಿ ತೀರಿಕೊಂಡ.

ಬಕಲ್‍ಗೆ ಡಾರ್ವಿನ್ನನ ವಿಕಾಸ ಸಿದ್ದಾಂತಗಳನ್ನು ಅರ್ಥಮಾಡಿಕೊಳ್ಳುವ ಮೊದಲೇ ಬರೆದ. ಭೌತ ಪ್ರಪಂಚದ ನಿಯಮಗಳಂತೆ ಕೆಲವು ನಿಯಮಗಳಿಂದ ಜನತೆಯ ಪ್ರಗತಿ ನಿಯಂತ್ರಿಸಲ್ಪಟ್ಟಿರುತ್ತದೆ ಎಂದು ಬಕಲ್ ನಂಬಿದ್ದ. ಅವುಗಳ ಸ್ವಭಾವವನ್ನು ಸಂಬಂಧಪಟ್ಟ ಕೆಲವು ಐತಿಹಾಸಿಕ ವಸ್ತುಗಳ ಅನುಗಮನ ಅಧ್ಯಯನದಿಂದ ನಿರ್ಧರಿಸಲು ಯತ್ನಿಸಿದ. ಪ್ರಕೃತಿಯ ಪ್ರಭಾವ ಮಾನವನಲ್ಲಿ ಇಳಿಮುಖವಾಗಿ ಯೂರೋಪಿನ ಜನತೆಯಲ್ಲಿ ಸಾತ್ತ್ವಿಕ ವಿಚಾರತೆಯ ಅಭಿರುಚಿಯನ್ನು ಹೆಚ್ಚಿಸಿತೆಂಬ ವಾದವನ್ನು ಮುಂದಿಟ್ಟು ಇವನು ನಾಗರಿಕತೆಯ ಪ್ರಗತಿಯನ್ನು ಜ್ಞಾನದ ಬೆಳೆವಣಿಗೆಯೊಂದಿಗೆ ಒಂದುಗೂಡಿಸಿದ. ಇವನ ಕೃತಿ ಯಾವುದೇ ಹೊಸ ಆಲೋಚನೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿಲ್ಲವೆಂದು ತೀವ್ರವಾಗಿ ಟೀಕಿಸಲ್ಪಟಿದ್ದರೂ ಅದರ ಪ್ರಾಮುಖ್ಯ ಬಹುಶಃ ಅದರ ವಾದ ವಿವಾದದಲ್ಲಿಯೇ ಅಡಗಿದೆ.
(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ